ಕಾಮಶಿಕ್ಷಣ

ಗಂಡು ಹೆಣ್ಣುಗಳ ಸಮಸ್ಯೆಗಳಿಗೆ ಸಂಬಂಧಿಸಿದ ಶಿಕ್ಷಣ (ಸೆಕ್ಸ ಎಜ್ಯುಕೇಷನ್). ಕಾಮಪ್ರವೃತ್ತಿ ಮತ್ತು ಕಾಮವರ್ತನೆಯ ಜ್ಞಾನವನ್ನೂ ಅವುಗಳ ಮೇಲೆ ವ್ಯಕ್ತಿ ಅಗತ್ಯವಾಗಿ ಸಾಧಿಸಬೇಕಾದ ಹತೋಟಿಯನ್ನೂ ಒದಗಿಸುವ ಶಿಕ್ಷಣ. ಗಂಡು ಹೆಣ್ಣುಗಳೆಂಬ ಭೇದವಿಶೇಷದ ಫಲವಾಗಿ ವಸ್ತುಸ್ಥಿತಿಯಿಂದ ಉದ್ಭವಿಸುವ ವೈಯಕ್ತಿಕ ಮತ್ತು ಸಾಮುದಾಯಿಕ ಸಮಸ್ಯೆಗಳ ಮತ್ತು ನಿಯಮಗಳ ವೈಜ್ಞಾನಿಕ ಅಧ್ಯಯನ ಇದರಲ್ಲಿ ಸೇರುತ್ತದೆ. ಅಲ್ಲದೆ ಕಾಮಾಂಗಳ ರಚನೆ ಮತ್ತು ಆರೋಗ್ಯಗಳ ಅಧ್ಯಯನ, ಕಾಮಜೀವನದಲ್ಲಿ ಹಿತಕರವಾದ ಹೊಂದಿಕೆಯ ಜ್ಞಾನ-ಇವೂ ಸೇರುತ್ತವೆ ವ್ಯಕ್ತಿಯ ಪರಿಸರ ವಿದ್ಯೆ, ವಯೋಮಾನಗಳಿಗೆ ಅನುಗುಣವಾಗಿ, ಹಂತಹಂತವಾಗಿ ಈ ಶಿಕ್ಷಣವನ್ನು ಒದಗಿಸಬೇಕಾಗುತ್ತದೆ.

ಸದ್ಯದಲ್ಲಿ ಸತಿಪತಿಯರ ಸಮಾಗಮ, ಸಂತಾನೋತ್ಪತ್ತಿ, ಜನನಾಂಗಗಳು, ಕಾಮಪ್ರಚೋದನೆ, ಗರ್ಭ-ಇತ್ಯಾದಿ ವಿಷಯಗಳ ಬಗ್ಗೆ ಮಕ್ಕಳಿಗೆ ಸಕ್ರಮವಾಗಿ ಏನನ್ನೂ ಬೋಧಿಸುತ್ತಿಲ್ಲ. ಈ ವಿಷಯಗಳನ್ನೆಲ್ಲ ಬಹು ಗುಟ್ಟಾಗಿ ಇಡಲಾಗಿದೆ. ಇವುಗಳ ಬಗ್ಗೆ ಮಕ್ಕಳು ಏನನ್ನು ಕೇಳಲೂ ಹೆದರುತ್ತವೆ. ನಾಚುತ್ತವೆ. ಸೂಕ್ತ ಮಾರ್ಗದರ್ಶನವಿಲ್ಲದಲ್ಲಿ ಮಕ್ಕಳ ಮನಸ್ಸು ತಮಗೆ ತೋರಿದ ದಾರಿಯಲ್ಲಿ ಅಂದರೆ ಅಹಿತಕರವಾಗ ದಾರಿಯಲ್ಲಿ ಹರಿಯುವ ಸಂಭವವುಂಟು. ಲೈಂಗಿಕೆ ಸ್ವಚ್ಛತೆ, ಅವುಗಳ ಬೆಳವಣಿಗೆಯ ಉದ್ದೇಶ, ಮದುವೆ, ಸಂಭೋಗ, ಸಂತಾನ ಮೊದಲಾದವುಗಳ ಪರಸ್ಪರ ಸಂಬಂಧ-ಇತ್ಯಾದಿ ವಿಷಯಗಳನ್ನು ಶಾಸ್ತ್ರೀಯವಾಗಿ ತಿಳಿಯುವುದೂ ವಿದ್ಯಾಭ್ಯಾಸದ ಮುಖ್ಯ ಅಂಗವೇ ಆಗಿದೆ. ಸರಿಯಾದ ತಿಳಿವಳಿಕೆಯಿಂದ ಮಕ್ಕಳು ಯುಕ್ತಮಾರ್ಗ ಪ್ರವರ್ತಕರಾಗಲು ಸಾಧ್ಯವಾಗುತ್ತದೆ.

ಸರಿಯಾದ ಕಾಮಶಿಕ್ಷಣದಿಂದ ಮುಂದಿನ ವೈವಾಹಿಕ ಜೀವನ ಸುಗಮವಾಗುವುದಲ್ಲದೆ, ವಿವಾಹಾನಂತರದ ವಿರಸಗಳು, ವಿವಾಹವಿಚ್ಛೇದನ, ವ್ಯಭಿಚಾರ-ಮೊದಲಾದ ಅಕೃತ್ಯಗಳು ತಪ್ಪುತ್ತವೆಂದು ಕೆಲವರ ಮತ. ಏನಿಲ್ಲದಿದ್ದರೂ ವಿವಾಹಕ್ಕೆ ಮೊದಲು ಯುವಕ ಯುವತಿಯರು ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆಯಂತೂ ಸರಿಯಾದ ಮಾರ್ಗದರ್ಶನ ನೀಡಬೇಕಾದುದು ಅಗತ್ಯವೆನಿಸುತ್ತದೆ.

ಕಾಮ ಎನ್ನುವುದು ಜೀವನದಲ್ಲಿ ಬಹುಮುಖ್ಯವಾದ ಒಂದು ಶಕ್ತಿಭಂಡಾರ. ಅದನ್ನು ಗಿರಿನಿರ್ಝರದಂತೆ ಹರಿದು ಬರಿದಾಗಲು ಬಿಡದೆ ಅದಕ್ಕೆ ಅಣೆ ನಿರ್ಮಿಸಿ ಯೋಗ್ಯವಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಮನುಷ್ಯ ಆರೋಗದೃಢಕಾಯನಾಗಿ ಬಹುಕಾಲ ಬದುಕುತ್ತಾನೆ, ಅವನಿಂದ ಪ್ರತಿಭಾನ್ವಿತವಾದ ಕೆಲಸಗಳು ಜರುಗುತ್ತವೆ. ಹೀಗೆಂದು ಪ್ರಸಿದ್ಧ ಮಾನವಶಾಸ್ತ್ರಜ್ಞರಾದ ಅಲೆಕ್ಸಿಸ್ ಕ್ಯಾರಲ್, ವಿಲ್ ಡು ರಾನ್ಟ್ ಮೊದಲಾದವರು ಹೇಳಿದ್ದಾರೆ. ಬರ್ಟ್‍ರೆಂಡ್ ರಸಲ್ ಮೊದಲಾದವರು ಯುವಜನಾಂಗಕ್ಕೆ ಯುಕ್ತ ಲೈಂಗಿಕ ಶಿಕ್ಷಣದೊಂದಿಗೆ ಲೈಂಗಿಕ ಅನುಭವವೂ ಅಗತ್ಯವೆಂದು ಹೇಳುತ್ತಾರೆ.

ಕಾಮಶಿಕ್ಷಣ ಕೊಡುವುದು ಕೇವಲ ಉಪಾಧ್ಯಾಯರ ಕರ್ತವ್ಯವೆಂದು ಕೆಲವರು ಹೇಳುವರು. ಯೋಗ್ಯ ಉಪಾಧ್ಯಾಯರ ಅಗತ್ಯವೆಂಬ ಮಾತನ್ನು ಒಪ್ಪಬಹುದಾದರೂ ಈ ಬಗ್ಗೆ ತಂದೆತಾಯಿಯರ, ಸಮಾಜದ ಹಿರಿಯರ ಕರ್ತವ್ಯ ಎಷ್ಟು ಮುಖ್ಯವೆಂಬುದನ್ನೂ ನಾವು ಗಮನಿಸಬೇಕು. ಮಕ್ಕಳ ಸಂಕೋಚಕ್ಕೆ ಎಡೆಗೊಂಡದಂತೆ, ಅವರವರ ಯೋಗ್ಯತೆಗೆ ಮೀರದಷ್ಟು ಲೈಂಗಿಕ ಜ್ಞಾನವನ್ನು ತಂದೆತಾಯಿಗಳು ಕೊಡಬೇಕಾಗುತ್ತದೆ. ಶಾಲೆಯಲ್ಲಿ ಈ ಶಿಕ್ಷಣಕ್ಕೆಂದು ಪ್ರತ್ಯೇಕವಾದ ಸ್ಥಳ, ಕಾಲಗಳನ್ನು ನಿಗದಿಮಾಡುವ ಅಗತ್ಯ ಕಾಣದು. ಸಸ್ಯ ಮತ್ತು ಪ್ರಾಣಿಶಾಸ್ತ್ರಗಳನ್ನು ಬೋಧಿಸುವಾಗ, ಕಾವ್ಯಪುರಾಣಾದಿಗಳ ಪ್ರಸಂಗಗಳು ಬಂದಾಗ ಉಚಿತವೆನಿಸುವಷ್ಟು ವಿಷಯಗಳನ್ನು ಉಪಾಧ್ಯಾಯ ತಿಳಿಸಬಹುದು. ವ್ಯಾಯಾಮರಂಗ, ಆಟದ ಮೈದಾನ, ಆರೋಗ್ಯಪಾಠದ ವೇಳೆ-ಇವು ಕಾಮಶಿಕ್ಷಣಕ್ಕೆ ಒಳ್ಳೆಯ ಸಮಯವೆನಿಸಿವೆ.

ಈ ವಿಷಯಗಳನ್ನು ಕಾಮಶಿಕ್ಷಣವೆನ್ನದೆ ಬ್ರಹ್ಮಚರ್ಯ ಪಾಲನೆ ಎಂದು ತಿಳಿದಲ್ಲಿ ಹೇಳುವವರಿಗೂ ಕೇಳುವವರಿಗೂ ಹೆಚ್ಚಿನ ಶ್ರದ್ದೆ, ಗಾಂಭೀರ್ಯ ಮೂಡಬಹುದು. ವಿವಾಹಕ್ಕೆ ಮೊದಲು ಯುಕ್ತ ಬ್ರಹ್ಮಚರ್ಯಪಾಲನೆಯಿಂದಲೂ ಅನಂತರ ಸದ್‍ಗೃಹಸ್ಥ ಧರ್ಮಾಚರಣೆಯಿಂದಲೂ ನಮ್ಮ ಮಕ್ಕಳು ಬೆಳೆದು ಬಾಳುವಂತೆ ಮಾಡುವುದೇ ಲೈಂಗಿಕ ಶಿಕ್ಷಣದ ಮುಖ್ಯೋದ್ದೇಶವಾಗಬೇಕು.

ಈ ಬಗ್ಗೆ ಅಮೆರಿಕ ಮತ್ತು ಯೂರೋಪಿನ ಅನೇಕ ಕಡೆಗಳಲ್ಲಿ ಹಚ್ಚಿನ ವ್ಯಾಸಂಗ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಇಂಥ ಶಿಕ್ಷಣದ ಅಗತ್ಯದ ಬಗ್ಗೆ ಎಲ್ಲರೂ ಒಮ್ಮತದ ಒಪ್ಪಿಗೆ ಕೊಟ್ಟಿದ್ದಾರೆನ್ನುವುದು ಪ್ರಕೃತ ಮುಖ್ಯವಾದ ಅಂಶ.

 

(ಬಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ